Search This Blog
Monday, May 25, 2020
Vijaykumar. A. G.: ನದಿಗಳ (ಜಲ) ರಕ್ಷಣೆ ಪ್ರತಿಯೊಬ್ಬರ ಹೊಣೆ.
Vijaykumar. A. G.: ನದಿಗಳ (ಜಲ) ರಕ್ಷಣೆ ಪ್ರತಿಯೊಬ್ಬರ ಹೊಣೆ.: ನದಿಗಳ (ಜಲ) ರಕ್ಷಣೆ ಪ್ರತಿಯೊಬ್ಬರ ಹೊಣೆ . ಪುರಾತನ ಕಾಲದಿಂದಲೂ ನದಿಗಳು ಹಾಗೂ ನದಿಗಳ ನೀರನ್ನು ಅತ್ಯಂತ ಪೂಜ್ಯನೀಯ ಭಾವದಿಂದ ನೋಡಲಾಗುತ್ತಿದೆ...
ನದಿಗಳ (ಜಲ) ರಕ್ಷಣೆ ಪ್ರತಿಯೊಬ್ಬರ ಹೊಣೆ.
ನದಿಗಳ
(ಜಲ) ರಕ್ಷಣೆ ಪ್ರತಿಯೊಬ್ಬರ ಹೊಣೆ.
ಪುರಾತನ ಕಾಲದಿಂದಲೂ ನದಿಗಳು ಹಾಗೂ ನದಿಗಳ ನೀರನ್ನು ಅತ್ಯಂತ ಪೂಜ್ಯನೀಯ ಭಾವದಿಂದ ನೋಡಲಾಗುತ್ತಿದೆ. ಸಾಮಾನ್ಯವಾಗಿ ಗಂಗಾ, ಯಮುನಾ, ನರ್ಮದಾ, ಕೃಷ್ಣಾ, ಭೀಮಾ ಇತ್ಯಾದಿ ನದಿಗಳನ್ನು ದೇವತೆಗಳಿಗೆ ಹೊಲಿಸಿ ಆದರಿಸಲಾಗುತ್ತದೆ. ಸಂಪ್ರದಾಯಸ್ತ ಭಾರತೀಯರಂತೂ ತಮ್ಮ ಮೇಲೆ ನೀರಿನ ಹನಿಗಳನ್ನು ಪ್ರೋಕ್ಷಣೆಮಾಡಿಕೊಂಡು ದೇಹ ಶುದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ರೀತಿ ಪ್ರಕೃತಿಯ ಮಹತ್ವದ ಕೊಡುಗೆಗಳಲ್ಲಿ ಬೆಳಕು, ಭೂಮಿ, ಗಾಳಿಯಂತೆಯೇ ಅತ್ಯಾವಶಕವಾದದ್ದು ನೀರು. ಜಲ ಇಲ್ಲದ ಪ್ರಕೃತಿಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಯಾಕಂದ್ರೆ ನೆಲದ ಮೇಲಿನ ಪ್ರತಿ ಜಲಚರಗಳು, ಪ್ರಾಣಿ, ಪಕ್ಷಿ, ಗಿಡ, ಮರ ಎಲ್ಲವೂ ಡಿಪೆಂಡ್ ಆಗಿರುವುದು ಈ ಜಲದ ಮೇಲೆ. ಜಲದ ಅಸ್ತಿತ್ವ ನಿಂತಿರುವುದು ನದಿಗಳ ಉಳಿವಿನ ಮೇಲೆ. ನಮ್ಮ ದೇಶದ ಪ್ರತಿ ನದಿಯೂ ವರ್ಷದ 12 ತಿಂಗಳು ತುಂಬಿ ಹರಿಯುತ್ತದ್ದ ಕಾಲ ಒಂದಿತ್ತು. ಆದರೆ ಅತೀಯಾದ ಯಾಂತ್ರೀಕರಣ, ಆಧುನೀಕರಣದಿಂದ, ಗಿಡಮರಗಳನ್ನು, ಅರಣ್ಯವನ್ನು ಅಳಸಿ, ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಹವಣಿಸುತ್ತಿರುವ ಮನುಷ್ಯನ ತೆವಲಿಗೆ ಸಿಲುಕಿ ನದಿಗಳು ತಮ್ಮ ಅವಸಾನದ ಸ್ಥಿತಿಯನ್ನು ತಲುಪಿವೆ. ಇದಕ್ಕೆ ಕಾರಣ ಮನುಷ್ಯ ಸೃಷ್ಟಿಯ ಚಲನೆಯಲ್ಲಿ ಒಡ್ಡುತ್ತಿರುವ ಅಸಮತೋಲನ. ಒಂದು ಮಾತು ತುಂಬಾ ಪ್ರಚಲಿತದಲ್ಲಿದೆ “ಈ ಪ್ರಕೃತಿಗೆ ಮಾನವನ ಆಸೆಯನ್ನು ಪೂರೈಸಬಲ್ಲ ಶಕ್ತಿ ಇದೆ. ಆದರೆ ಮಾನವನ ಅತೀ ಆಸೆ (ದುರಾಸೆ) ಯನ್ನು ಪೂರೈಸುವ ಶಕ್ತಿ ಇಲ್ಲಾ.”
ಸುಡು ಬೆಸಿಗೆಯ ಮಧ್ಯದಲ್ಲಿ ಇದ್ದೇವೆ ರಣಬಿಸಿಲು ಭೂಮಿಗೆ ಅಪ್ಪಳಿಸುತ್ತಿದೆ. ರೈತಾಪಿ ವರ್ಗ ಬೋರೋ, ಭಾವಿನೋ, ಕೆನಾಲೋ ಯಾವುದೋ ಒಂದು ರೀತಿಯಲ್ಲಿ ನೀರಿನ ಸಂಗ್ರಹದ ಬಗ್ಗೆ ಹೆಚ್ಚು ತಲೆಕೆಡಸಿಕೊಳ್ಳುತ್ತಿದೆ. ಜನ ಜಾನುವಾರಗಳಿಗೆ, ಹೊಲಗಳಲ್ಲಿ ಹಾಕಿದ ಪೈರುಗಳಿಗೆ ಪೂರೈಕೆಯಾಗುವಷ್ಟು ನೀರಾದರೆ ಸಾಕು ಅಂತಾ ಅನ್ನದಾತ ಅವಡುಗಚ್ಚಿ ಕುಳಿತ್ತಿದ್ದಾನೆ. ಪ್ರತಿ ವರ್ಷವೂ ವಾಡಿಕೆಗಿಂತ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನಿಗಧಿತ ಸಮಯದಲ್ಲಿ ನೀರಿಕ್ಷಿಸಿದ ಪ್ರಮಾಣದ ಬೆಳೆ ಕೈಗೆಟುಕುತ್ತಿಲ್ಲ. ಕಾರಣ ರೈತ ಸರ್ಕಾರದ ಸಹಾಯಧನದ ಆಸೆಗೆ ಕೈಒಡ್ಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ನಗರ ಪ್ರದೇಶಗಳಲ್ಲಿ ಪ್ರತಿ ಎಂಟು-ಹದಿನೈದು ದಿನಗಳಿಗೊಮ್ಮೆ ಸರಬರಾಜಾಗುವ ನೀರಿನ ಪದ್ದತಿ ಈ ಬಾರಿಯಾದರೂ ತಪ್ಪೀತೆ, ಅವಶ್ಯಕತೆಗೆ ತಕ್ಕಂತೆ ಪ್ರತಿ ಮನೆಗೂ ನೀರು ಸಿಕ್ಕಿತೇ ಎಂದು ನಗರವಾಸಿಗಳು ಕಾಯುತ್ತಿದ್ದಾರೆ. ಅದೇಷ್ಟು ಹಲುಬಿದರೂ ನಗರಸಭೆ, ಮಹಾನಗರ ಪಾಲಿಕೆಗಳು ಪ್ರತಿಮನೆಗೂ ಸಾಕಾಗುವಷ್ಟು ನೀರನ್ನು ಪೂರೈಸಲು ಹರಸಾಹಸ ಪಡುತ್ತಿವೆ. ಇಂತಹ ಅದೇಷ್ಟೋ ಸಮಸ್ಯೆಗಳ ಬಗ್ಗೆ ಮೂಲ ಕಾರಣ ಹುಡುಕುವ ಸಮಯ ಸನ್ನಿಹತವಾಗಿದೆ.
ಇವೆಲ್ಲಾ ಸಮಸ್ಯೆಗಳು ಬರಪೀಡಿತ ಪ್ರದೇಶಗಳಿಗೆ ಅಷ್ಟೇ ಸೀಮಿತವಾಗಿಲ್ಲ. ದಿನಕ್ಕೆ 50-60 ಸಾವಿರ ಭಕ್ತರನ್ನು ತನ್ನತ್ತ ಸೆಳೆಯುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬೆಸಿಗೆ ಪ್ರಾರಂಭವಾದರೇ ನೇತ್ರಾವತಿ ನದಿ ಒಳ ಹರಿವು ನಿಲ್ಲಿಸುತ್ತಿದೆ, ಕೊಲ್ಲೂರು, ಸುಬ್ರಹ್ಮಣ್ಯ, ಉಡುಪಿ, ಗೋಕರ್ಣಗಳಂತ ಪೂಜ್ಯನೀಯ ಹಾಗೂ ಪ್ರೇಕ್ಷಣೀಯ ನದಿ ನಾಡಿನ ಕರಾವಳಿಯ ತಾಣಗಳು ಜಲಕ್ಷಾಮಕ್ಕೆ ತುತ್ತಾಗಿವೆ. ತುಂಗಭದ್ರಾ ದಡದ ಮಂತ್ರಾಲಯ, ಕೃಷ್ಣಾ ತೀರದ ಕೋಡಲ ಸಂಗಮ ಎಲ್ಲಡೆಯೂ ನೀರಿನ ಅಭಾವ ಕಾಣಲಾರಂಭಿಸುತ್ತದೆ. ಬಳ್ಳಾರಿಯ ಮರಳು ಬಗೆದು ನೀರು ಹುಡುಕುವ ರೈತನ ಸಾಹಸ, ಒಂದು ಬಿಂದಿಗೆ ನೀರಿಗಾಗಿ ಮೈಲುಗಟ್ಟಲೆ ನಡೆದು ಹೋಗುವ ಬರಪೀಡಿತ ಪ್ರದೇಶದ ಪರಿಸ್ಥಿತಿ, ಹಸಿಬಟ್ಟೆಯಲ್ಲಿ ಮೈವರೆಸಿಕೊಂಡು ಸ್ನಾನ ಮುಗಿಸುವ ಅನಿವಾರ್ಯತೆ ತಲುಪುವ ಚಿತ್ರದುರ್ಗದ ಹಳ್ಳಿಗರ ಕಷ್ಟ ಹೇಳತೀರದಾಗುತ್ತದೆ.
ನಮ್ಮ ನದಿಗಳು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ದಡ ಉಕ್ಕಿ ಹರೆಯುವ ಹೊಳೆಗಳು, ಪ್ರವಾಹದ ಭೀತಿ, ಮುಳುಗಿದ ಮನೆಗಳು, ನೀರು ಪಾಲಾದ ಗದ್ದೆಗಳು, ಅಲ್ಲದೇ ಹಳ್ಳಿಗಳಲ್ಲಿಯ ಜೀವ ಹಾನಿಯ ಲೆಕ್ಕ ಹಾಕುತ್ತೇವೆ. ಆವಾಗ ಮಳೆಗಳ, ನದಿಗಳ, ಪ್ರವಾಹಗಳ ಪೈಶಾಚಿಕ ಕೃತ್ಯಕ್ಕೆ ಬೈಗುಳಗಳ ಸುರಿಮಳೆಗೈಯುತ್ತೇವೆ. ಅದೇ ಮೆಳಗಾಲ ಮುಗಿದು ನವ್ಹೆಂಬರ್-ಡಿಸೆಂಬರ್ ಪ್ರಾರಂಭವಾಗುತ್ತಿದ್ದಂತೆ ಅದೇ ನದಿಗಳು ಬತ್ತಿಹೋಗುತ್ತವೆ. ಇನ್ನೂ ಕೆಲವಡೆ ಅಧಿಕ ನೀರು ಬೇಕಾಗುವ ಕಬ್ಬು, ಭತ್ತ, ಅಡಿಕೆ ಬೆಳೆಗಳ ಹೆಚ್ಚಿನ ದರದ ನೀರಿಕ್ಷೆಯಲ್ಲಿ ಉದ್ದೇಶಿತ ಕೃಷಿ ಭೂಮಿಗೆ ನೀರು ಪೂರೈಸಲಾಗದೇ ಸರ್ಕಾರದ ಯೋಜನೆಗಳು ಪೋಲಾಗುತ್ತಿವೆ. ಇದೆಲ್ಲಾ ಲೆಕ್ಕ ಹಾಕಿದರೇ ವಾಡಿಕೆಯಷ್ಟು ಮಳೆ ಸುರಿದರೇ ನಮ್ಮೆಲ್ಲರ ಕಷ್ಟ ಪರಿಹರಿಸಬಹುದೇ ? ಇಲ್ಲಾ. ಯಾಕೆಂದ್ರೆ ನಾವೆಲ್ಲಾ ವಿವೇಚನೆ ಇಲ್ಲದೇ ಅತೀಯಾದ ನೀರು ಬಳಿಸುತ್ತಾ ಬರಕ್ಕೆ ಆಹ್ವಾನವಿತ್ತಿದ್ದೇವೆ. ಕರ್ನಾಟಕದಲ್ಲಿ ಪ್ರಮುಖವಾಗಿ ಏಳು ನದಿಗಳು ಹರಿಯುತ್ತವೆ. 3472.5 ಟಿ.ಎಂ.ಸಿ. ನೀರಿದೆ. ಇವುಗಳಲ್ಲಿ ಶೇ 50 ರಷ್ಟು ಬಳಕೆಯಾಗುತ್ತಿದೆ. ರಾಜ್ಯದ ಶೇ 70 ರಷ್ಟು ಪ್ರದೇಶವು ಕಡಿಮೆ ಮಳೆಯಾಗುವ ಪ್ರದೇಶವಾಗಿದೆ. ನಾವು ಎಷ್ಟೇ ಪ್ರಯತ್ನಿಸಿದರೂ ಭೂಮಿಯ ಶೇ 60 ರಷ್ಟು ಭಾಗವನ್ನು ನೀರಾವರಿಗೆ ಅಳವಡಿಸುವದು ದುಸ್ಥರವಾಗಿದೆ. 2011 ರಲ್ಲಿ 123 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. 2018 ರಲ್ಲಿ ಅದು 156 ತಾಲೂಕುಗಳಿಗೆ ಬಂದು ತಲುಪಿದೆ. ಇನ್ನೂ ಹೆಚ್ಚಾಗುವ ಎಲ್ಲ ಲಕ್ಷಣಗಳು ಇವೆ. ಇನ್ನೂ ಮುಂದುವರೆದು ಲಭ್ಯವಿದ್ದ ನೀರು ಎಷ್ಟು ಕುಡಿಯಲು ಯೋಗ್ಯವಾಗಿದೆ ಎಂಬುದು ಮತ್ತೊಂದು ಪ್ರಶ್ನೆ?. 2018 ರ ಡಿಸೆಂಬರ್ನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನದಿ ನೀರಿನ ಗುಣಮಟ್ಟದ ವರ್ಗೀಕರಣ ವರದಿ ಬಿಡುಗಡೆಗೊಳಿಸಿದೆ. ಅದರಲ್ಲಿ ಆಘಾತಕಾರಿ ವಿಷಯ ಬಯಲಾಗಿದ್ದು, 19 ನದಿಗಳಿಂದ ಸಂಗ್ರಹಿಸಲಾದ 94 ಜಲಮಾದರಿಗಳಲ್ಲಿ ಭೌತ, ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶಗಳನ್ನು ಪರೀಕ್ಷಿಸಿತ್ತು. ಅದರಲ್ಲಿ ರಾಜ್ಯದ ಯಾವ ನದಿಯ ನೀರು ಸಂಸ್ಕರಿಸದೇ ಕುಡಿಯಲು ಯೋಗ್ಯವಲ್ಲವೆಂಬ ಅಂಶ ಬಯಲಾಗಿದೆ. ಒನ್ಸ ಅಗೇನ್ ಇದಕ್ಕೆಲ್ಲಾ ಕಾರಣ ನಾವು. ಅಂದ್ರೆ ನದಿ ತಟದಲ್ಲಿ ವಾಸವಾಗಿರುವ ನಗರವಾಸಿಗಳು ಹೊರಸೂಸುವ ಗೃಹ ತ್ಯಾಜ್ಯ ಮತ್ತು ಔದ್ಯೋಗೀಕ ಪ್ರಗತಿಯ ದ್ಯೋತಕದಂತಿರುವ ಕೈಗಾರಿಕೆಯ ಕಾರ್ಖಾನೆಗಳು ಹೊರಹಾಕುವ ತ್ಯಾಜ್ಯಗಳೇ ಕಾರಣ. ಅವೆಲ್ಲವೂ ಹರಿಯುವ ನದಿಯೊಂದಿಗೆ ಸೇರಿ ಪವಿತ್ರ ಜಲ ಕಲುಷಿತವಾಗುತ್ತಿದೆ.
ಸುಂದರವಾದ ನಾಡು ಈಗ ಮರಭೂಮಿಯಾಗುತ್ತಿದೆ. ಜನಸಾಮಾನ್ಯರಲ್ಲಿ ಇದರ ಅರಿವಿಗಾಗಿ ಕರ್ನಾಟಕ ಸರ್ಕಾರ 2019 ರ ವರ್ಷವನ್ನು “ಜಲವರ್ಷ” ವೆಂದು ಘೋಷಿಸಿತು. ನಮ್ಮದು ಶೇ70 ರಷ್ಟು ಬರಪೀಡಿತ ಭೂಮಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಲಸಾಕ್ಷರತೆಯ ಮೂಲಕ ನದಿಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದು. ಜಲಸಂರಕ್ಷಣೆ, ನೀರಿನ ಸದ್ಬಳಕೆ, ಹಸಿರೀಕರಣದ ಗುರಿ ಇಟ್ಟುಕೊಂಡು ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ, ಶಾಲೆ, ಕಾಲೇಜು, ಸರ್ಕಾರಿ ಕಛೇರಿ, ಸಂಘ, ಸಂಸ್ಥೆಗಳು, ಮಹಿಳೆಯರು, ಮಕ್ಕಳು, ರೈತರು ಸೇರಿದಂತೆ ಸರ್ವರು ಭಾಗವಹಿಸಬೇಕೆಂಬ ಆಶಯದೊಂದಿಗೆ “ಸರ್ವರಿಗೂ ಜಲ ಸದಾಕಾಲ” ಎಂಬ ಘೋಷವಾಕ್ಯೆಯೊಂದಿಗೆ ಕಾರ್ಯಪ್ರವೃತ್ತವಾಗಿದೆ. ಆದರೂ ಜನಜಾಗೃತಿಮಾತ್ರ ಅಷ್ಟಾಗಿ ಆಗಿಲ್ಲ. ನದಿಗಳ ಉಳುವಿಗಾಗಿ ಸದ್ಗುರು ಜಗ್ಗಿ ವಾಸುದೇವ ಗುರುಜಿರವರು “ನದಿಗಳ ರಕ್ಷಣೆ”ಗಾಗಿ ಜನಾಂದೋಲನವನ್ನು ಪ್ರಾರಂಭಿಸಿದ್ದಾರೆ. ನದಿ ಪಾತ್ರದ ಜನರು ನದಿಗಳ ದಡದಲ್ಲಿ ಎರಡು ಬದಿಗೆ ಹೂವು, ಹಣ್ಣು ಹಾಗೂ ಔಷಧೀಯ ಗಿಡಮರಗಳನ್ನು ಬೆಳೆಯುವಂತೆ ಸರ್ಕಾರದ ಸಹಯೋಗದೊಂದಿಗೆ ದೊಡ್ಡ ಮಟ್ಟದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಅದಕ್ಕೆ ನಾವೆಲ್ಲಾ ಸಮ್ಮತಿ ಸೂಚಿಸಿ ಕೈಲಾದಷ್ಟು ಸರ್ಕಾರದ ನಿಲುವನ್ನು ಬಲಪಡಿಸಬೇಕು. ನಮ್ಮ ಸುತ್ತ ಮುತ್ತಲಿನ ವಾತಾವರಣ ಸಂಪೂರ್ಣ ಹಸಿರಾಗುವವರೆಗೆ ನಿಲ್ಲದೇ ನಗರ ಪಟ್ಟಣ ಗ್ರಾಮಗಳನ್ನೇದರೆ ಪ್ರತಿಯೊಬ್ಬರು ತಮ್ಮ ಅಳಿಲು ಸೇವೆಯನ್ನು ನದಿಗಳ, ಪ್ರಕೃತಿಯ ರಕ್ಷಣೆಗೆ ಕಾಯ್ದಿರಿಸಬೇಕು. ಈಗಾಗಲೇ ಶಾಲೆಗಳಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಗಿಡಗಳನ್ನು ನೀಡಲಾಗುತ್ತಿದೆ. ಅವರವರ ಹೊಲ ಗದ್ದೆಗಳಲ್ಲಿ ಅಥವಾ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಿಗಧಿತ ಅವಧಿಯಲ್ಲಿ ಯಾವ ಮಗುವಿನ ಗಿಡಗಳು ಬಲಿಷ್ಟ ಹಾಗೂ ಆರೋಗ್ಯಕರವಾಗಿ ಬೆಳೆದಿರುತ್ತವೆ ಅಂತವುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನೀಡಲಾಗುತ್ತಿದೆ. ಅಲ್ಲದೇ ಸರ್ಕಾರದ ನಿಗಧಿತ ಪ್ರದೇಶಗಳಲ್ಲಿ ಅರಣ್ಯ ಅಭಿವೃದ್ಧಿಗಾಗಿ ಸರ್ಕಾರ ಶ್ರಮಪಡುತ್ತಿದೆ. ಅವರೊಂದಿಗೆ ನಾವು ನಮ್ಮ ಸುತ್ತಲ ವಾತಾವರಣದಲ್ಲಿ ಹಸಿರು ಮೂಡುವ ಹಾಗೆ ಮಾಡಬೇಕಾಗಿದೆ. ಇದರಿಂದ ಮಳೆ ಪ್ರಮಾಣ ನೈಸರ್ಗಿಕವಾಗಿ ಹೆಚ್ಚಿಸಬಹುದಾಗಿದೆ. ಯಾಕೆಂದರೆ ಪ್ರಕೃತಿ ಹಸಿರಾಗದ ಹೊರತು ನದಿಗಳು ತುಂಬಿ ಹರಿಯುವುದು ಸಾಧ್ಯವಿಲ್ಲ. ಹಾಗೆಯೇ ನದಿಗಳು ತಮ್ಮ ಹರಿವು ನಿಲ್ಲಿಸಿದರೇ ಪ್ರಕೃತಿಯಲ್ಲಿ ಮಾನವನ ಉಳಿವು ಕೂಡಾ ಸಾಧ್ಯವಿಲ್ಲ. ಹಾಗಾದರೆ ಬನ್ನಿ ನಾವೂ ಕೈ ಜೋಡಿಸೋಣ ನದಿಗಳ (ಜಲ) ರಕ್ಷಣೆಗೆ ನಮ್ಮ ಅಳಿಲು ಸೇವೆಯನ್ನು ಮಾಡೋಣ.
Subscribe to:
Posts (Atom)