Search This Blog

Friday, April 24, 2020

ಮಹಾ ದೃಶ್ಯಕಾವ್ಯಗಳೆರಡನ್ನು ಮರು ಪ್ರಸಾರಮಾಡಿದಕ್ಕೆ ಧನ್ಯೋ ಧನ್ಯೋಷ್ಮಿ.


ಮಹಾ ದೃಶ್ಯಕಾವ್ಯಗಳೆರಡನ್ನು ಮರು ಪ್ರಸಾರಮಾಡಿದಕ್ಕೆ ಧನ್ಯೋ ಧನ್ಯೋಷ್ಮಿ. 
  ಭಾರತದ ಭವ್ಯ ಪರಂಪರೆಯನ್ನು ಸಾರುವ ಭಾರತ ದೇಶದ ಈ ಮಹಾಕಾವ್ಯಗಳನ್ನು ಅದೆಷ್ಟು ಬಾರಿ ಕೇಳಿದರು, ನೋಡಿದರು ಸಾಲದು. ಪ್ರತಿ ಸಾರಿಯ ಒಂದೊಂದು ಸಂದರ್ಭಗಳು, ಒಂದೊಂದು ಸನ್ನಿವೇಶಗಳು ಹೊಸತನದ ಅನುಭವವನ್ನು ನೀಡುತ್ತವೆ. ಸ್ವಾರ್ಥ, ಮೋಸ, ಅಧಿಕಾರ ದಾಹ, ಅತ್ಯಾಚಾರ, ಅನೀತಿ, ಅಧರ್ಮ, ಅನಾಚಾರ ಒಂದೆಡೆಯಾದರೆ ಧ್ಯಾನ, ಭಕ್ತಿ, ತ್ಯಾಗ, ಗೌರವಾಧರ, ಸಭ್ಯೆತೆ, ಸಹೋದರತೆ, ಸನ್ನಡತೆ, ಧರ್ಮ ಪಾಲನೆಯ ಮೂಲಕ ಸದ್ಗತಿ ಹೊಂದುವ ಸನ್ನಿವೇಶಗಳು ಇನ್ನೊಂದೆಡೆ. ಪ್ರತಿ ಮಾನವ ಜೀವಮಾನದೂದ್ದಕ್ಕೂ ಅನುಭವಿಸುವ ಈ ಸ್ವಭಾವಗಳ ಸರಪಳಿಯಂತಿರುವ ಈ ಎರಡು ಮಹಾಕಾವ್ಯಗಳನ್ನು ದೃಶ್ಯಕಾವ್ಯಗಳಾಗಿ ಮಾರ್ಪಡಿಸಿ ನೋಡಿದಾಗ ಅದೇಷ್ಟೋ ವರ್ಷ ಪುರಾತನವಾದರೂ ಇಂದಿಗೂ ಕೂಡಾ ಪ್ರಸ್ತುತ ಅನ್ನೀಸುತ್ತವೆ.

ಪ್ರೀಯ ಮಿತ್ರರೇ ಬನ್ನಿ ನಿಮಗೆಲ್ಲಾ ಸುಮಾರು 30-35 ವರ್ಷ ಹಿಂದೆ, ಅಂದರೆ 80 ದಶಕದ ದಿನಗಳಿಗೆ ಕರೆದ್ಯೂಯುತ್ತೇನೆ. ಹೌದು ಆಗ ನಾವಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೇವು. ಆಗೆಲ್ಲಾ ಈಗಿನಂತೆ ಎಲ್ಲರ ಮನೆಗಳಲ್ಲೂ ಪ್ರತಿಯೊಬ್ಬರಿಗೆ ಒಂದು-ಎರಡು ಮೊಬೈಲ್ಗಳು, ಬೈಕ್-ಕಾರುಗಳು, ಮನೆ ಮನೆಗೆ ಕಲರ್ ಟಿವ್ಹಿಗಳು ಇರಲಿಲ್ಲಾ. ಹಳ್ಳಿಗಳ ಸಾಹುಕಾರರ ಮನೆಗಳಲ್ಲಿ, ಯಾರೋ ಗಲ್ಲಿಗಳ ಶ್ರೀಮಂತರ ಮನೆಗಳಲ್ಲಿ ಒಂದು ಟಿವ್ಹಿ ಅದೂ ಬ್ಲಾಕ್ & ವೈಟ್ ಟಿವ್ಹಿ ಇರುತ್ತಿತ್ತು. ಮನೆಗೆ ಏರಿಯಾದ ಎಲ್ಲ ಜನಸಮೂಹ ಮುಗಿಬಿದ್ದು, ಮನೆಯವರಿಂದ ಬೈಗಳುಗಳನ್ನು ಪ್ರಸಾದವಾಗಿ ಸ್ವೀಕರಿಸಿ ಟಿವ್ಹಿ ಚಪಲ ತೀರಿಸಿಕೊಳ್ಳುತ್ತಿದ್ದ ದಿನಗಳವು. ಆಗ ನಮ್ಮ ತಂದೆ ಇಂದಿನ ಬಾಗಲಕೋಟ ಜಿಲ್ಲೆಯ ಜಮಖಂಡಿಯಲ್ಲಿ ಕಾನಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಾವು ವಾಸವಿದ್ದ ಪೋಲೀಸ್ ಕ್ವಾಟರ್ಸ್ನಲ್ಲಿ ಅಂದಾಜು 100-130 ಮನೆಗಳಿರಬಹುದು. ಅಷ್ಟು ದೊಡ್ಡ ಕ್ವಾಟರ್ಸ್ನಲ್ಲಿ ಎಲ್ಲರಿಗೂ ದಾರಾವಾಹಿಗಳನ್ನು ನೋಡಲಿಕ್ಕೆ ಅನುಕೂಲವಾಗಲಿ ಎಂದು ಒಂದು ಟಿ.ವ್ಹಿ.ಯನ್ನು 10-12 ಅಡಿ ರೂಂ ನಲ್ಲಿ ಅಳವಡಿಸಿದ್ದರು. ನಾವೆಲ್ಲ ಒಂದು ಘಂಟೆಗಳ ಮುಂಚೆ ಅಲ್ಲಿ ಹೋಗಿ ನಮ್ಮ ಸ್ಥಳಗಳನ್ನು ಭದ್ರಪಡಿಸಿಕೊಳ್ಳಬೇಕಾಗಿತ್ತು. ಕಿಕ್ಕಿರಿದು ಜಮಾಯಿಸುವ ಜನಜಂಗುಳಿ ಮಧ್ಯ ನಮಗೆ ಧ್ವನಿ ಕೇಳಿಸುತ್ತಿರಲಿಲ್ಲಾ. ಕೇಳಿಸಿದರೂ ಅವರ ಭಾಷೆ ಅರ್ಥವಾಗುತ್ತಿರಲಿಲ್ಲಾ. ದೂರದಿಂದ ಚಿತ್ರ ಕಂಡರು ಅಂದು ನಮ್ಮ ಸಂತೋಷಕ್ಕೆ ಸಾಟಿ ಇರುತ್ತಿರಲಿಲ್ಲ. ಅಂದಿನ ದಾರಾವಾಹಿ ಮುಗಿದ ನಂತರ ನಾವು ಅದೇ ಪಾತ್ರದಾರಿಗಳಾಗಿ ಕಟ್ಟಿಗೆಯ ಬಿಲ್ಲು-ಬಾಣಗಳನ್ನು, ಗಧೆಗಳನ್ನು ತಯಾರಿಸಿಕೊಂಡು ಆಟ ಆಡುತ್ತಿದ್ದೇವು. ಈಗಿನ ಪಾಲಕರಂತೆ ಆಗಿನ್ನೂ ರ್ಯಾಂಕಿನ ರೇಸ್ನಲ್ಲಿ ಮಕ್ಕಳ ಬಾಲ್ಯವನ್ನು ಬಲಿಕೊಡುವ ಸಂಸ್ಕøತಿ ಅಷ್ಟಾಗಿ ಪ್ರಾರಂಭವಾಗಿರಲಿಲ್ಲ. ನಮಗೆಲ್ಲಾ ಆಗ ಮನೊರಂಜನೆಗೆ ಇದ್ದಿದ್ದೂ ಆಟಗಳೇ, ಅವು ಒಂದೇ-ಎರಡೇ ಗೋಲಿ, ಲಗ್ಗೊರಿ, ಕುಂಟಾಪಿಲ್ಲೆ, ಗಿಡಮಂಗ್ಯಾ, ಚಿನ್ನಿ-ದಾಂಡು, ದಪ್ಪಾ-ದುಪ್ಪಿ, ಮುಟ್ಟಾಟ, ಕಳ್ಳಾ-ಪೋಲೀಸ್, ಬಿಟ್ಟರೆ ಗೆಳಯರ ಹೊಲ ಗದ್ದೆಗಳಿಗೆ ಹೋಗಿ ತರ ತರದ ಹಣ್ಣುಗಳನ್ನು ತಿನ್ನುವುದು, ಅಲ್ಲಿನ ಸೃಷ್ಠಿ ಸೌಂದರ್ಯದಲ್ಲಿ ಮಿಂದೆಳುವುದು. ದಿನಗಳನ್ನು ನೆನೆದರೆ ನೆನಪಿಗೆ ಬರುವುದು ಒಂದೇ ಹಾಡು ಅದು ನಮ್ಮ ಪಠ್ಯಕ್ರಮಕ್ಕೆ ಇದ್ದ ಹಾಡು, “ಬಾರ ಬಾರ ಆತಿ ಹೈ ಮುಜಕೂ ಮದುರ ಯಾದ ಬಚಪನ ತೇರಿ, ಗಯಾ ಲೇಗಯಾ ಇಸ್ ಜೀವನಕೀ ಸಬಸೇ ಮದುರ ಖುಷಿ ಮೇರಿ,” ಆಹಾ ಅದೆಂತಹ ಆನಂದದ ದಿನಗಳು,
ಮಿತ್ರರೇ ಸಧ್ಯಕ್ಕೆ ಇದಿಷ್ಟು ಅಂದಿನ ದಿನಗಳ ಮೆಲಕು. ಬನ್ನಿ ಈಗ ಅಂದು ಪ್ರಾರಂಭಗೊಂಡರಾಮಾಯಣಎಂಬ ಭಕ್ತಿ ಪ್ರದಾನ ದಾರಾವಾಹಿಯ ಬಗ್ಗೆ ಮಾತನಾಡೋಣ. ರಾಮಾಯಣ ಪ್ರಸಾರವಾಗಿದ್ದು 1987-1988 ರಲ್ಲಿ ದೂರದರ್ಶನ ಚೆನಲ್ನಲ್ಲಿ ಪ್ರಸಾರವಾಯಿತು. ಇದಕ್ಕೆ ಸಾಹಿತ್ಯ ಮತ್ತು ನಿರ್ದೇಶನ ರಮಾನಂದ ಸಾಗರ್ ಅವರು ಮಾಡಿದ್ದರು. ಇದು ವಾಲ್ಮೀಕಿರಾಮಾಯಣಮತ್ತು ತುಳಿಸಿದಾಸರರಾಮಚರಿತ ಮಾನಸವನ್ನು ಆಧಾರವಾಗಿಟ್ಟುಕೊಂಡು ತಯಾರಿಸಲಾಗಿತ್ತು. ಸೀರಿಯಲ್ನ್ನು ಸುಮಾರು 82% ಜನ ಅಂದರೆ 40 ಮಿಲಿಯನ್ನಷ್ಟು ಜನ ಮೆಚ್ಚಿದ್ದರು. ಅಲ್ಲದೇ ಇದರಿಂದ ದೂರದರ್ಶನಕ್ಕೆ ಪ್ರತಿ ವಾರಕ್ಕೆ ಆವಾಗ 40 ಲಕ್ಷದಷ್ಟು ಆದಾಯ ಬರುತ್ತಿತ್ತು. ಇದರಲ್ಲಿ ಪ್ರಧಾನ ಪಾತ್ರದಾರಿಗಳಾಗಿ ರಾಮ-ಅರುಣ ಗೋಯಲ್, ಸೀತಾ-ದೀಪಿಕಾ ಚಿಕಾಲಿಯಾ, ಲಕ್ಷ್ಮಣ-ಸುನೀಲ ಲಹರಿ, ಹಣುಮಂತ-ದಾರಾಸಿಂಗ್, ವಾಲಿ&ಸುಗ್ರೀವ್-ಶಾಮಸುಂದರ ಕಲಾನಿ, ರಾವಣ-ಅರವಿಂದ ತ್ರಿವೇದಿಯವರು ನಟಿಸಿ, ಜನಮಾನಸದಲ್ಲಿ ತಮ್ಮ ಅಚ್ಚಳಿಯದ ಛಾಪು ಮೂಡಿಸಿದ್ದರು. ರಾಮಾಯಣ ಒಟ್ಟು 78 ಕಂತುಗಳಲ್ಲಿ ಪ್ರಸಾರವಾಯಿತು. ಜನ ದಾರಾವಾಹಿಯ ಪಾತ್ರದಾರಿಗಳನ್ನೇ ದೇವರೆಂದು ಅಕ್ಷರಸಹ ಒಪ್ಪಿ, ಇವರನ್ನು ಕಂಡಲ್ಲೆಲ್ಲಾ ಕೈಮುಗಿದು, ಪೂಜೆಮಾಡಿ ಆರಾಧಿಸುತ್ತಿದ್ದರು. ಒಮ್ಮೆಯಂತೂ ಗಂಗಾನದಿ ದಂಡೆಯಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಇವರನ್ನು ನೋಡಲು ಲಕ್ಷಾವಧಿಯಲ್ಲಿ ಜನ ಮುಗಿಬಿದ್ದಿದ್ದರು. ಅಂದು ನಾವೆಯಲ್ಲಿ ಕುಳಿತ ರಾಮ, ಸೀತಾ & ಲಕ್ಷ್ಮಣರು ಗಂಗೆಯನ್ನು ದಾಟಿಹೋಗಬೇಕಾದ ದೃಶ್ಯ ಸೆರೆಹಿಡಿಯಲು ಹರಸಾಹಸ ಪಡಬೇಕಾಯಿತು. ಎಲ್ಲಿಯವರೆಗೆ ನೋಡುತ್ತಿರೂ ಅಲ್ಲಿಯವರೆಗೆ ಕೇವಲ ನೆರೆದಿದ್ದ ಜನರ ತಲೆಗಳು ಮಾತ್ರ ಕಾಣುತ್ತಿರುವುದನ್ನು ಕಂಡು ಪಾತ್ರಧಾರಿಗಳೇ ಆವಕ್ಕಾಗಿದ್ದರು. ಅಷ್ಟೋಂದು ಪ್ರಭಾವಶಾಲಿಯಾಗಿತ್ತು ರಾಮಾಯಣ.
ಇನ್ನುಮಹಾಭಾರತ ಬಗ್ಗೆ ಹೇಳುವುದಾದರೆ ಇದು ಅಕ್ಟೋಬರ್-02 1988 ರಿಂದ ಜೂನ್-24 1990 ವರೆಗೆ ಪ್ರಸಾರವಾಯಿತು. ಭಾರತದ ಐತಿಹಾಸಿಕ ದಾರಾವಾಹಿಗಳ ಇತಿಹಾಸದಲ್ಲಿ ಹೆಚ್ಚು ಪ್ರಸಿದ್ದಿ ಪಡೆದ, ಅತೀ ಹೆಚ್ಚು ದಿನಗಳವರೆಗೆ ಪ್ರಸಾರವನ್ನು ಕಂಡ ದಾರಾವಾಹಿಗಳಲ್ಲಿ ಮೊದಲನೇಯದ್ದು ಎಂಬ ಕೀರ್ತಿ ಇದಕ್ಕೆ ಸಲ್ಲುತ್ತದೆ. ಇದು ಒಟ್ಟು 94 ಕಂತುಗಳನ್ನು ಹೊಂದಿದ್ದು, ಇದನ್ನೂ ಬಿ.ಆರ್. ಚೋಪ್ರಾ ಅವರು ನಿರ್ಮಾಣಮಾಡಿದ್ದರು. ನಿರ್ದೇಶನ ಅವರ ಪುತ್ರ ರವಿ ಚೋಪ್ರಾ ಮಾಡಿದ್ದರು. ಇದನ್ನು ವ್ಯಾಸ ವಿರಚಿತ ಮಹಾಭಾರತದ ಆಧಾರದ ಮೇಲೆ ನಿರ್ಮಿಸಲಾಗಿದ್ದು, ಶೀರ್ಷಿಕೆಯ ಗೀತೆಗೆ ಹಿನ್ನಲೆ ಧ್ವನಿ ನೀಡಿದವರು ಮಹೇಂದ್ರ ಕಪೂರ ಅವರು. ಮುಖ್ಯ ಭೂಮಿಕೆಯಲ್ಲಿ ಕೃಷ್ಣ-ನೀತೀಶ ಭಾರಧ್ವಾಜ, ಭೀಷ್ಮ-ಮುಖೇಶ ಖನ್ನಾ, ಧರ್ಮರಾಜ-ಗಜೇಂದ್ರ ಚವ್ಹಾಣ, ಅರ್ಜುನ-ಅರ್ಜುನ, ಭೀಮ-ಪ್ರವೀಣಕುಮಾರ, ದುರ್ಯೋಧನ-ಪುನೀತ ನಿಸ್ಸಾರ, ಕರ್ಣ-ಪಂಕಜ ಧೀರ್ ಮತ್ತು ದ್ರೌಪದಿ-ರೂಪಾ ಗಂಗೂಲಿಯವರು ನಟಿಸಿದ್ದರು. ಇದರ ತಯಾರಿಕೆಯಲ್ಲಿ ಒಟ್ಟು ಒಂಬತ್ತು ಕೋಟಿಗಳಷ್ಟು ಖರ್ಚು ಬಂದಿತ್ತು. ಎರಡು ದಾರಾವಾಹಿಗಳ ಪಾತ್ರದಾರಿಗಳು, ಅವರ ಉಡುಗೆ-ತೊಡುಗೆ, ಪ್ರತಿ ದೃಶ್ಯಾವಳಿಯ ಸೊಬಗು, ಸೃಷ್ಠಿಯ ಸೌಂದರ್ಯ, ಯುದ್ಧ ಪ್ರಸಂಗಗಳಿಗೆ ಅವಶ್ಯವಾದ ಶಸ್ತ್ರಾಸ್ತ್ರಗಳು, ಯುದ್ಧದ ಸನ್ನಿವೇಶಗಳು, ಪ್ರತಿಯೊಂದನ್ನು ಹೊಂದಿಸುವುದು ತುಂಬಾ ಕಷ್ಟ ಸಾಧ್ಯ. ಪೌರಾಣಿಕ ಹಿನ್ನಲೆಹೊಂದಿದ ಕಥೆಯನ್ನು ಅಷ್ಟೇ ಮಾರ್ಮಿಕವಾಗಿ ವಿವರಿಸುತ್ತಾ ಸಾಗುವ ದಾಟಿ ಎಂತಹ ನೋಡುಗನನ್ನು ತಲ್ಲಣಗೊಳಿಸುವಂತಹದ್ದು, ರವಿವಾರ ಮುಂಜಾನೆ ಆಗುವದಕ್ಕೆ ಒಂದು ವಾರ ಕಾಯಬೇಕಲ್ಲಾ ಎಂಬ ಕೌತುಕ ಪ್ರತಿಯೊಬ್ಬರನ್ನು ಕಾಡುತ್ತಿತ್ತು. ಭಾನುವಾರದ ಸಂಭ್ರಮ ತಡೆಯಲಾರದಷ್ಟು ಬೆಳಿಗ್ಗೆ ಎಲ್ಲ ಕೆಲಸಗಳನ್ನು ಮುಗಿಸಿ, ಮನೆಯ ಹೆಂಗಸರು, ಗಂಡಸರು, ವಯೋವೃದ್ಧರು, ಚಿಕ್ಕ ಮಕ್ಕಳು, ಅಷ್ಟೇ ಅಲ್ಲಾ ಅಕ್ಕ ಪಕ್ಕದವರು ಬಂದು ತಯಾರಾಗಿ ಕುಳಿತು ಕುಟುಂಬ ಸಮೇತರಾಗಿ ವೀಕ್ಷಿಸುತ್ತಿದ್ದರು.

ಅಷ್ಟಕ್ಕೂ ಎರಡು ಮಹಾ ದೃಶ್ಯಕಾವ್ಯಗಳಲ್ಲಿ ಅಂತದೇನು ಇತ್ತು? ಅದರಿಂದ ನಮಗಾಗುವ ಲಾಭಗಳಾದರೇನು? ಇಂದಿನ ಯುಗಕ್ಕೂ ಅಂದಿನ ದಿನ ಅವರು ತಗೇದುಕೊಂಡ ನಿರ್ಧಾರಗಳಿಗೂ ಏನು ಸಂಬಂಧ? ಅದರಿಂದ ಇಂದು ನಮಗೆ ಸಿಗುವ ನೀತಿಯಾದರೂ ಏನು? ಎಂಬುದನ್ನು ವಿಚಾರಿಸಲಾಗಿ, ಎರಡು ಮಹಾಕಾವ್ಯಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿರುವುದನ್ನು ಕಾಣುತ್ತೇವೆ. ರಾಮಾಯಣದಲ್ಲಿ ಹೆಂಡತಿ ಕೈಕೆಗೆ ದಶರಥ ಮಹಾರಾಜ ಕೊಟ್ಟ ಮಾತನ್ನು ಪಾಲಿಸುತ್ತ ಮಗನಿಗೆ ವನವಾಸಕ್ಕೆ ಕಳುಹಿಸುವ ತಂದೆ, ತಂದೆಯ ಮಾತನ್ನು ಮೀರದೇ ಪಟ್ಟಾಭಿಷೇಕವನ್ನು ತಿರಸ್ಕರಿಸಿ ಅಯೋಧ್ಯಾ ರಾಜ್ಯವನ್ನು ತೊರೆದು, ಸಹೋದರ ಲಕ್ಷ್ಮಣ ಹಾಗೂ ಮಡದಿ ಸೀತೆಯೊಂದಿಗೆ ಕಾಡು ಪ್ರವೇಶಿಸುವ ರಾಮ. ಪುತ್ರ ವಿರಹದಿಂದ ಸಾವನ್ನಪ್ಪುವ ದಶರಥ ರಾಜನಿಗೆ ಭರತನಿಂದ ಅಗ್ನಿ ಸ್ಪರ್ಷ. ನಂತರ ಉತ್ತರಾಧಿಕಾರವನ್ನು ಧಿಕ್ಕರಿಸಿ ಅಣ್ಣನಿಗೆ ಭೇಟಿಯಾಗಿ ರಾಜನಾಗಿ ರಾಜ್ಯಭಾರ ಸಂಬಾಳಿಸುವಂತೆ ಮನವಿ ಮಾಡುವ ಭರತ, ಅವನ ಹಾಗೂ ರಾಜ್ಯಗುರುಗಳ, ಋಷಿ ಮೂನಿಗಳ ಮನವಿಯನ್ನು ಅಷ್ಟೇ ನಯವಾಗಿ ನಿರಾಕರಿಸುತ್ತಾ 14 ವರ್ಷಗಳ ವನವಾಸದ ನಂತರ ರಾಜ್ಯಭಾರ ಸ್ವೀಕರಿಸುವ ವಚನ ನೀಡುವ ರಾಮ, ಹಿರಿಯ ಸಹೋದರನ ಮಾತುಗಳನ್ನು ತಪ್ಪದೇ ಪಾಲಿಸುತ್ತೇನೆ ಎಂದು ವಚನವಿತ್ತು ಅವನ ಪಾದುಕೆಗಳನ್ನು ತಲೆ ಮೇಲೆ ಹೊತ್ತು ಅಯೋಧ್ಯೆಗೆ ನಡೆಯುವ ಭರತರ ದೃಶ್ಯ ಎಂತವರ ಕಣ್ಣುಗಳಲ್ಲಿಯೂ ನೀರು ತರಿಸುವ ಭಾವೂಕ ಕ್ಷಣ. ಅಲ್ಲಿಂದ ವಿವಿಧ ಅರಣ್ಯಗಳಲ್ಲಿ ಸಂಚರಿಸಿ ಋಷಿ ಮುನಿಗಳ ತಪೋಭೂಮಿಗಳಿಗೆ ನಮಿಸಿ, ಅವರಿಗೆ ಜೀವ ಕಂಟಕವಾಗುತ್ತಿರುವ ರಾಕ್ಷಸರನ್ನು ಸಂಹರಿಸಿ, ವನವಾಸದ ಕೊನೆಯ ವರ್ಷಗಳಲ್ಲಿ ಶೂರಪನಿಕೀಯ ಕಾಮಾತುರತೆಯಿಂದ ಅವಳ ಅವಮಾನ, ಅದರ ಪ್ರತಿಕಾರವಾಗಿ ಮೋಸದ ಸಂಚುಗಾರ ರಾವಣನಿಂದ ಸೀತೆಯ ಅಪಹರಣ, ಮಾರ್ಗ ಮಧ್ಯ ಝಟಾಯು ಕದನ, ಝಟಾಯುನಿಂದ ಮಾರ್ಗಸೂಚಿ ಪಡೆದು ವಾನರ ರಾಜ್ಯ ಕಿಷ್ಕಿಂದಾಕ್ಕೆ ರಾಮ ಲಕ್ಷ್ಮಣರ ಪ್ರವೇಶ. ಅಲ್ಲಿಯ ರಾಜ್ಯ ವಾಲಿ-ಸುಗ್ರೀವ್ ಯುದ್ಧ, ರಾಮನಿಂದ ವಾಲಿ ಹತ್ಯೆ, ನಂತರ ಸುಘ್ರೀವನಿಗೆ ಪಟ್ಟಾಭಿಷೇಕ ಅವನ ಸೈನ್ಯದೊಂದಿಗೆ ಹಣುಮನೊಡಗೂಡಿ ಲಂಕಾ ಮೇಲೆ ದಾಳಿ, ಅಲ್ಲಿಯ ಅಸುರ ಶಕ್ತಿಯಿಂದ ದೇವಾನುದೇವತೆಗಳಿಗೆ ತಲೆನೋವಾಗಿ ಪರಿಣಮಿಸಿದ ಎಲ್ಲ ಅಸೂರ ರಾಕ್ಷಸರಿಗೆ ಕೊಂದು, ರಾವಣನ ವಧೆ ನಂತರ ವಿಭೀಷಣನಿಗೆ ಪಟ್ಟಾಬಿಷೇಕಮಾಡಿ ಸೀತೆಯೊಂದಿಗೆ ಅಯೋಧ್ಯೆಗೆ ಬಂದು ರಾಜ್ಯಭಾರ. ಉತ್ತರ ರಮಾಯಣದಲ್ಲಿ ಸೀತೆ ಮೇಲೆ ಅಗಸನ ಅಪವಾದ, ಅಷ್ಟರಲ್ಲಿ ಗರ್ಭೀಣಿಯಾದ ಸೀತೆಯನ್ನು ವನವಾಸಕ್ಕೆ ಅಟ್ಟುವುದು, ಮುನಿ ಆಶ್ರಮದಲ್ಲಿ ಲವ ಕುಶರ ಜನನ ಮುಂದೆ ತಂದೆಯೊಂದಿಗೆ ಮಕ್ಕಳ ಯುದ್ಧ ತಯಾರಿ. ಸೀತೆ ಆಗಮನ, ಮಕ್ಕಳನ್ನು ತಂದೆಗೆ ಒಪ್ಪಿಸಿ, ಅಲ್ಲಿಯೇ ಭೂತಾಯಿ ಗರ್ಭ ಪ್ರವೇಶ. ಇದೀಷ್ಟು ರಾಮಾಯಣದ ಮುಖ್ಯಾಂಶ.
ಇನ್ನೂ ಮಹಾಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಪೂರ್ತಿ ಕಥೆಯುದ್ಧಕ್ಕೂ ಹಸ್ತಿನಾಪುರ ರಾಜ ಸಿಂಹಾಸನಕ್ಕಾಗಿ ಕಾದಾಟ. ಕಥೆ ಸ್ವಾರಸ್ಯಕರವಾಗುವುದೇ ದೃತರಾಷ್ಟ್ರ, ಪಾಂಡು ಪುತ್ರರಾದ ಕೌರವ ಪಾಂಡವರ ಜನನದೊಂದಿಗೆ ಹಿರಿಯಣ್ಣನಾದ ದೃತರಾಷ್ಟ್ರ ಹುಟ್ಟು ಕುರುಡನಾಗಿದ್ದ ಕಾರಣ ಸಿಂಹಾಸನವನ್ನು ಪಾಂಡುಗೆ ನೀಡಬೇಕಾದ ಸಂದರ್ಭ. ಶಾಪಗ್ರಸ್ತನಾದ ಪಾಂಡು ಮರಣಾ ನಂತರ ತಾತ್ಕಾಲಿಕವಾಗಿ ದೃತರಾಷ್ಟ್ರನಿಗೆ ಪಟ್ಟಾಭಿಷೇಕ. ತನ್ನ ಮಕ್ಕಳಾದ ಕೌರವ ಹಾಗೂ ಪಾಂಡು ಪುತ್ರರಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ದೃತರಾಷ್ಟ್ರನ ಅಳಿಯ ಗಾಂಧಾರದ ಶಕುನಿಯ ಕುತಂತ್ರದ ಪಗಡೆ ಆಟದಲ್ಲಿ ದುರ್ಯೋಧನ ಪಾಂಡವರನ್ನು ಸೋಲಿಸಿ ಅವರನ್ನು ಕಾಡಿಗೆ ಕಳುಹಿಸುವ ಸನ್ನಿವೇಶ. ಅವರ ಹನ್ನೇರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸ ನಂತರ ಅವರಿಗೆ ಕೃಷ್ಣ ಧೂತನಾಗಿ ಕೇವಲ 5 ಗ್ರಾಮಗಳನ್ನು ನೀಡುವಂತೆ ಬೇಡಿಕೆ. ದುರ್ಯೋಧನಿಂದ ಅವರಿಗೆ ಸೂಜಿಯ ಮಣಿಯಷ್ಟು ಸ್ಥಳ ನೀಡಲೂ ನಿರಾಕರಣೆ. ಅಲ್ಲಿಂದ ಪ್ರಾರಂಭವಾಗುವ ಯುದ್ಧಕ್ಕೆ ಕುರುಕ್ಷೇತ್ರ ಯುದ್ಧ ಭೂಮಿ, ಧರ್ಮ ಯುದ್ಧದ ಭೂಮಿಯಾಗಿ ಪರಿವರ್ತನೆ. ಕುರುಕ್ಷೇತ್ರದಲ್ಲಿ ಎದುರಾಳಿಗಳಾಗಿ ನಿಂತ ರಕ್ತಸಂಬಂಧಿಗಳನ್ನು, ಸ್ನೇಹಿತರನ್ನು, ಬಂಧು-ಬಾಂದವರನ್ನು ಕಂಡು ವಿಚಲಿತನಾದ ಅರ್ಜುನನಿಗೆ ಶ್ರೀಕೃಷ್ಣನಿಂದ ಭಗವದ್ಗೀತಾ ಪ್ರವಚನ. ಅದರಿಂದ ಉತ್ತೇಜಿತನಾದ ಅರ್ಜುನ ಯುದ್ಧಕ್ಕೆ ಸನ್ನದ. ಮುಂದೆ ನಡೆದಿದೆಲ್ಲ ಈಗ ಇತಿಹಾಸ. ಅಸತ್ಯದ ಮೇಲೆ ಸತ್ಯದ ವಿಜಯ, ಅಧರ್ಮದ ಮೇಲೆ ಧರ್ಮದ ವಿಜಯ. ಕುರುಕ್ಷೇತ್ರ ದುರ್ಯೋಧನಾದಿಯಾಗಿ 101 ಕೌರವ ಸಹೋದರರ, ಭೀಷ್ಮ, ದ್ರೋಣ, ಕೃಪಾಚಾರ್ಯ, ಕರ್ಣನಂತ ನೂರಾರು ವೀರರ, ಸಾವಿರಾರು ಸಾಮಂತ ಅರಸರ, ಲಕ್ಷಾವಧಿಯಲ್ಲಿ ಸೈನಿಕರ ನರಸಂಹಾರಕ್ಕೆ ಸಾಕ್ಷಿಯಾಗುತ್ತದೆ. ಯುಧಿಷ್ಠೀರನ (ಧರ್ಮರಾಜನ) ಪಟ್ಟಾಬಿಷೇಕದೊಂದಿಗೆ ಮಹಾಭಾರತ ಮೊದಲ ಹಂತ ಮುಗಿಯುತ್ತದೆ.
ಎರಡು ಮಹಾದೃಶ್ಯ ಕಾವ್ಯಗಳಲ್ಲಿಯ ಪ್ರತಿಯೊಂದು ಪಾತ್ರಗಳಿಗೆ ತಮ್ಮದೇ ಆದ ಮಹತ್ವವಿದೆ. ಹಲವಾರು ಉಪಕಥೆಗಳ ಹಿನ್ನಲೆ ಮುಖ್ಯ ಕಥೆಗಳಿಗೆ ಪೂರಕವಾಗಿವೆ. ಇವುಗಳ ಮುಖಾಂತರ ಮನುಷ್ಯನಿಗೆ ಅರಿಷಡ ವರ್ಗಗಳ ನಿಯಂತ್ರಣ ಬಗ್ಗೆ ತಿಳಿಸಲಾಗಿದೆ. ಮಾನವ ಪ್ರಕೃತಿಯೊಂದಿಗೆ ಹೊಂದಿದ ಸಂಬಂದ ಎಷ್ಟು ದೂರವಾಗುತ್ತದೆ. ಅಷ್ಟೇ ಮನುಕುಲದ ಸರ್ವ ನಾಶಕ್ಕೆ ನಾಂದಿಯಾಗುತ್ತದೆ. ನಾವು ಪ್ರತಿದಿನ ನೋಡುತ್ತೇವೆ ಇಂದಿನ ನಾಗರಿಕ ಸಮಾಜದಲ್ಲಿ ಬಲಶಾಲಿಯಂತೆ ನಿರ್ಬಲನೂ ಕೂಡಾ ಬದುಕು ಸಾಗಿಸುತ್ತಿದ್ದಾನೆ. ಆದರೆ ಅವರನ್ನಾಳುವ ನಾಯಕರುಗಳ ಜೀವನಕ್ರಮ ಆಯಾಮ ತಪ್ಪುತ್ತಿದೆ. ಕೇವಲ ಐದು ವರ್ಷಕ್ಕೆ ಸಿಗುವ ಖುರ್ಚಿಗಾಗಿ ಅವರು ನಡೆಸುವ ಕಸರತ್ತುಗಳು ಜನರಿಗೀಗ ಅರ್ಥವಾಗುತ್ತಿವೆ. ಬಡವರನ್ನು ಬಡವರನ್ನಾಗಿ ಇಡಲು ನಡೆಸುವ ಮಸಲತ್ತುಗಳು ಬೆಳಕೆಗೆ ಬರುತ್ತಿವೆ. ಇಂತವುಗಳನ್ನು ನೋಡುವುದರಿಂದ ಯಾವುದೇ ಮಾರ್ಗದಿಂದಾದರೂ ಅಧಿಕಾರ, ಹಣ, ಸಂಪತ್ತಿನ ಪ್ರಾಪ್ತಿಯೊಂದೆ ಜೀವನದ ಮುಖ್ಯ ಗುರಿ ಅಲ್ಲಾ ಎನ್ನುವುದು ತಿಳಿಯುತ್ತದೆ. ಕಸಿದು ತಿನ್ನುವುದಕ್ಕಿಂತ ಹಂಚಿ ತಿನ್ನುವುದರಲ್ಲಿ ಇರುವ ಆನಂದ ಹೆಚ್ಚು ಅನುವುದನ್ನು ಕಲಿಸುತ್ತವೆ. ಇಂದಿನ ಯುಗದಲ್ಲಿ ಪ್ರೇಕ್ಷಕರ ಅಭಲಾಷೆಗೆ ತಕ್ಕಂತೆ ತೋರಿಸುತ್ತೇವೆ ಅಂತಾ ಹೇಳ್ತಾ ಸಮೂಹ ಮಾಧ್ಯಮಗಳು ತಮ್ಮ ವ್ಯಾಪ್ತಿಯನ್ನು ಮೀರುತ್ತಿವೆ. ಕೆಲವು ದಾರಾವಾಹಿ ಮತ್ತು ಚಲನ ಚಿತ್ರಗಳು ಕೇವಲ ಖಳನಾಯಕ (ಕುರುಕ್ಷೇತ್ರ) ಪಾತ್ರ ಪ್ರಧಾನವಾಗುತ್ತಿದ್ದು, ಯುವ ಪೀಳಿಗೆಗೆ ಅಧರ್ಮದ ಹಾದಿ ತುಳಿಯವಲ್ಲಿ ಪ್ರೋತ್ಸಾಹಿಸುತ್ತಿವೆ. ಮೊದಲು ತಾವು ಸ್ವಅಧ್ಯಯನಮಾಡಿ ಮತ್ತೋಬ್ಬರಿಗೆ ಅದರ ಕುರಿತು ಸನಮಾರ್ಗದಡೆಗೆ ಕರೆದೊಯ್ಯಬೇಕು. ಅದನ್ನು ಕಲಿಸುವುದೇ ಇಂತಹ ಪ್ರೌರಾಣಿಕ ದಾರಾವಾಹಿಗಳ ವೀಕ್ಷಣೆ. “ರಾಮಾಯಣ ನಮಗೆ ಏನು ಮಾಡಬೇಕು ಅಂತಾ ಕಲಿಸುತ್ತದೆ. ಮಹಾಭಾರತ ನಮಗೆ ಏನನ್ನು ಮಾಡಬಾರದು ಅಂತಾ ಕಲಿಸುತ್ತದೆ. ಭಗ್ವದಗೀತಾ ನಮಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ.” ಇದನ್ನು ಪಾಲಿಸಿದ ಪ್ರತಿಯೊಬ್ಬರು ಸದ್ಗತಿ ಹೊಂದುವುದರಲ್ಲಿ ಎರಡು ಮಾತಿಲ್ಲ. 
ಇಂತಹ ಮಹಾ ಕಾವ್ಯಗಳು ಕೋರೋನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್ ಡೌನ್ ಆದ ಸಮಯದಲ್ಲಿ ಮರು ಪ್ರಸಾರವಾಗಿದ್ದು, ತುಂಬಾ ಸಂತೋಷದ ವಿಷಯ. ಒಂದಡೆ ಸರ್ಕಾರದ ಅತೀ ಹಳೆಯ ದೂರದರ್ಶನ ಚೆನಲ್ ತೆರೆಮರಿಗೆ ಸರಿಯುತ್ತಲಿತ್ತು. ಉಳಿದ ಚೆನಲ್ಗಳ ಚಮಕ್ ದಮಕ್ಗಳ ಎದುರು ಅವಸಾನದ ಸ್ಥಿತಿಗೆ ತಲುಪಿತ್ತು. ಲಾಕ್ ಡೌನ್ನಿಂದಾಗಿ ಮೈಕೊಡವಿಗೊಂಡು ಎದ್ದು ನಿಂತ ದೂರದರ್ಶನ ಚೆನಲ್ ಮತ್ತೇ ರೇಟಿಂಗ್ ರೇಸ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ತನ್ನ ಗತಕಾಲದ ವೈಭವವನ್ನು ಮರಳಿ ಪಡೆದುಕೊಂಡಿದೆ. ರಾಮಾಯಣ ಅತೀ ಹೆಚ್ಚು ನೋಡುಗರನ್ನು ಗಳಿಸಿಕೊಂಡಿದೆ. ಅದರ ನಂತರದ ಕೀರ್ತಿ ಮಹಾಭಾರತ ದಾರಾವಾಹಿಯದು. ಇವು ಇದುವರೆಗೆ 145.8 ಮಿಲಿಯನ್ನಷ್ಟು ಜನ ನೋಡುಗರನ್ನು ಗಳಸಿಕೊಂಡಿವೆ. ಇವುಗಳಷ್ಟೇ ಅಲ್ಲದೇ ಚಾಣಕ್ಯ, ಶಕ್ತಿಮಾನ್, ಸರ್ಕಸ್, ದಿ ಜಂಗಲ್ ಬುಕ್, ದೇಖ ಬಾಯಿ ದೇಖ, ಭುನಿಯಾದ ನಂತಹ ದಾರಾವಾಹಿಗಳನ್ನು ಮರು ಪ್ರಸಾರಮಾಡಿ ದೂರದರ್ಶನ ಮೊದಲಿಗಿಂತ ಸಾವಿರಾರು ಪಟ್ಟು ಶೇಕಡಾವಾರು ನೋಡುಗರನ್ನು ಹೆಚ್ಚಿಸಿಕೊಂಡಿದೆ. ರಾಮಾಯಣ, ಮಹಾಭಾರತದಂತಹ ಸೀರಿಯಲ್ಗಳನ್ನು ಪ್ರಸಾರಮಾಡಕೂಡದು ಇವುಗಳಲ್ಲಿ ಹಿಂದುತ್ವ ಎದ್ದು ಕಾಣುತ್ತದೆ ಅಂತಾ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಅಂತವರಿಗೆ ನ್ಯಾಯಾಧೀಶರು ಮಂಗಳಾರತಿ ಮಾಡಿದ್ದು ನಿಮಗೆಲ್ಲಾ ಗೋತ್ತಿರುವ ವಿಚಾರ. ಕೊನೆಯಲ್ಲಿ ಹೇಳುವುದಿಷ್ಟೇ ಇಂತಹ ಒಳ್ಳೆಯ ನೀತಿಯುಳ್ಳ ಕಥೆ, ಕಾದಂಬರಿ, ದಾರಾವಾಹಿಗಳನ್ನು ನೀವು ನೋಡಿ ನಿಮ್ಮ ಮಕ್ಕಳಿಗೂ ತೋರಿಸಿ, ಒಂದು ಸುಸಂಸ್ಕೃತಿಯನ್ನು ಮುಂದಿನ ಪಿಳಿಗೆಗೆ ಧಾರೆಯರಿಯುವಲ್ಲಿ ಪಾಲ್ಗೊಳ್ಳಿ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇರೀ, ಎಚ್ಚರದಿಂದ ಸರ್ಕಾರ ಸೂಚಿಸಿದ ನಿಮಯಗಳನ್ನು ಪಾಲಿಸುತ್ತಾ ಸಮಯವನ್ನು ಸದ್ವಿನಿಯೋಗಿಸಿಕೊಳ್ಳಿ. ಆದಷ್ಟು ಬೇಗ ನಾವೆಲ್ಲರೂ ಇದರಿಂದ ಪಾರಾಗುತ್ತೇವೆ ಎನ್ನುವ ಭರವಸೆಯೊಂದಿಗೆ, ***

ವಿಜಯಕುಮಾರ  ಗೋಲಗೇರಿ.
ಟಿ.ವ್ಹಿ. ಹಾಗೂ ಆಕಾಶವಾಣಿ ನಿರೂಪಕರು, ವಿಜಯಪುರ.
ಅಯನ-6.
(ಅಂತರಾಳದ ಭಾವಗಳಿಗೊಂದು ಕನ್ನಡಿ.)